ನಾಸೀಮ್
ಹಿಂದಿ ಚಿತ್ರರಂಗದ ನಟಿ. ಮೂವತ್ತರ ಮತ್ತು ನಲವತ್ತರ ದಶಕದಲ್ಲಿ ಪ್ರಸಿದ್ಧಿ ಪಡೆದಿದ್ದ ಇವಳು ಆಗರ್ಭ ಶ್ರೀಮಂತ ಮನೆತನದಲ್ಲಿ ಜನಿಸಿದವಳು. ಇವಳನ್ನು ವೈದ್ಯಳನ್ನಾಗಿ ಮಾಡಬೇಕೆಂದು ಮನೆಯವರ ಅಭಿಲಾಷೆಯಾದರೆ ಇವಳಿಗೆ ತಾರೆಯಾಗುವ ಇಚ್ಛೆ. ಇವಳ ತಾರಾಗುಣವನ್ನು ಗುರುತಿಸಿದ ಸೊಹ್ರಾಬ್ ಮೋದಿ ತನ್ನ ಹ್ಯಾಮ್ಲೆಟ್ ಚಿತ್ರದಲ್ಲಿ ಅಭಿನಯಿಸಲು ಆಹ್ವಾನಿಸಿದ. ತಂದೆ ತಾಯಿಗಳು ಬೇಡವೆಂದರೂ ಹಠಹಿಡಿದು ನಟಿಸಿದ ಇವಳಿಗೆ ಅದ್ಭುತ ಯಶ ದೊರಕಿತು. ತನ್ನ ಓದು ಮುಗಿಸಲು ದೆಹಲಿಗೆ ಮರಳಿದ ಇವಳಿಗೆ ಯಾವ ಕಾಲೇಜಿನಲ್ಲಿಯೂ ಪ್ರವೇಶ ದೊರೆಯಲಿಲ್ಲ. ಚಿತ್ರನಟಿಯಾಗಿದ್ದುದೇ ಇದಕ್ಕೆ ಕಾರಣ. ಮರಳಿ ಚಿತ್ರರಂಗ ಪ್ರವೇಶಿಸಿ ಖಾನ್ ಬಹಾದೂರ್, ಮೀಠಾ ಜಹರ್, ವಾಸಂತಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದಳು. ಮಿನರ್ವಾ ಮೂವಿಟೋನ್ ಸಂಸ್ಥೆಯ ಐತಿಹಾಸಿಕ ಭವ್ಯಚಿತ್ರ ಪುಕಾರ್ ಈಕೆಯ ತಾರಾಜೀವನದ ಮೈಲಿಗಲ್ಲು. ಅತ್ಯಂತ ಮಹತ್ತ್ವದ ಪಾತ್ರ ನೂರ್‍ಜಹಾನಳಾಗಿ ಕಾಣಿಸಿಕೊಂಡು ಸುಂದರ ಅಭಿನಯ ನೀಡಿರುವ ಈಕೆ ಈ ಚಿತ್ರದಲ್ಲಿ ಸ್ವತಃ ಹಾಡಿದ್ದಾಳೆ. ಈ ಚಿತ್ರದ ಜಹಾಂಗೀರ್ ಪಾತ್ರದಲ್ಲಿ ಹಸಿರು ಕಣ್ಣಿನ ಚಂದ್ರಮೋಹನ್ ಅಭಿನಯಿಸಿದ್ದ. ಇದೇ ಚಿತ್ರ ಸಂಸ್ಥೆಯವರ ಶೀಷ್ ಮಹಲ್ ಚಿತ್ರದಲ್ಲಿಯೂ ಪತನ ಹೊಂದಿದ ಜಮೀನ್‍ದಾರನ ಬಡಮಗಳಾಗಿ ಈಕೆ ಅದ್ಭುತ ಅಭಿನಯ ನೀಡಿದ್ದಾಳೆ. ಖ್ಯಾತ ಫಿಲ್ಮಿಸ್ತಾನ್ ಸಂಸ್ಥೆಗೆ ಹೋದ ಇವಳು ಚಲ್ ಚಲ್‍ರೆ ನೌಜವಾನ್ ಚಿತ್ರದಲ್ಲಿ ಅಶೋಕ್ ಕುಮಾರ್‍ನೊಂದಿಗೆ ನಟಿಸಿ ಅಪಾರ ಜನಪ್ರಿಯತೆ ಗಳಿಸಿದಳು.  ಅದ್ದೂರಿಯ ವಸ್ತ್ರವೈಭವದ ಶಾಬಿಸ್ತಾನ್ ಚಿತ್ರದಲ್ಲಿ ಉದ್ದನೆಯ ನಿಲುವು ಗೌನುಗಳನ್ನು ಧರಿಸಿದ ಸ್ಪ್ಯಾನಿಷ್ ಕನಸಿನ ರಾಣಿಯಂತೆ ಕಾಣಿಸಿಕೊಂಡಳು. ಇವಳಿಗೆ ಬಂದಿದ್ದ ಸೌಂದರ್ಯ ರಾಣಿಯ ಬಿರುದು ಅತ್ಯಂತ ಅರ್ಹವಾದುದಾಗಿತ್ತು. ಇವಳ ಇತರ ನಾಯಕರೆಂದರೆ ಶ್ಯಾಮ್ (ಶಾಬಿಸ್ತಾನ್), ರೆಹಮಾನ್ (ಆಜೀಬ್‍ಲಡ್ಕಿ), ಅಜಿತ್ (ತರಂಗ್), ಚಿರಯೌವನದ ನಟಿ ಎಂದೂ ಪ್ರಸಿದ್ಧಳಾಗಿದ್ದ ಇವಳಿಗಿಂತ ಹತ್ತು ವರ್ಷ ಕಿರಿಯವನಾದ ಅಜಿತ್ ಇವಳ ಪತಿ. ಆತ ಎಹ್‍ಸಾನ್ ಚಿತ್ರನಿರ್ಮಾಪಕನಾಗಿ ತನ್ನ ತಾಜ್ ಮಹಲ್ ಪಿಕ್ಚರ್ಸ್ ಸಂಸ್ಥೆಯಲ್ಲಿ ಉಜಾಲ, ಮುಲಾಕತ್, ಬೇಗಂ, ಚಾಂದೀರಾತ್ ಮತ್ತು ಅಜೀಬ್ ಲಡ್ಕಿ ಚಿತ್ರಗಳನ್ನು ತಯಾರಿಸಿದ.

ವಿಪುಲ ವಿದೇಶ ಪ್ರವಾಸ ಮಾಡಿರುವ ಈಕೆ ಏಳು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿದ್ದು ಅಖಿಲ ಯೂರೋಪ್ ಪ್ರವಾಸ ಮಾಡಿದ್ದಾಳೆ. ನರ್ಗೀಸ್ ಸುರಯ್ಯರಂಥ ಹೊಸ ತಲೆಮಾರಿನ ನಟಿಯರು ಬಂದಾಗ ಹಿಂದಿನ ತಲೆಮಾರಿನ ನಟಿಯರು ಹಿನ್ನೆಲೆಗೆ ಸರಿಯಬೇಕಾಯಿತು.  ನಾಸೀಮಳು ಬಾಘಿ, ಸಿಂದಾಬಾದ್‍ನಂಥ ಮೂರನೆಯ ದರ್ಜೆ ಚಿತ್ರಗಳಲ್ಲೂ ರಂಜನ್‍ನಂಥ ತಾರಾಮೌಲ್ಯವಿಲ್ಲದ ನಟನ ಜೊತೆಯಲ್ಲಿಯೂ ಅಭಿನಯಿಸಬೇಕಾಯಿತು. ಅನಂತರ ಚಿತ್ರರಂಗದಿಂದ ದೂರ ಸರಿದ ಈಕೆ ಬಹು ಕಾಲಾನಂತರ ರಾಜಕುಮಾರ್‍ನೊಂದಿಗೆ ನೌಶೇರ್‍ವಾನ್-ಎ-ಆದಿಲ್‍ದಲ್ಲಿ (1957) ಕಾಣಿಸಿಕೊಂಡಳು. ಅನಂತರ ಮತ್ತೆ ಮತ್ತೆ ಬೇಡಿಕೆಗಳು ಬಂದರೂ ಎಲ್ಲವನ್ನೂ ನಿರಾಕರಿಸಿದಳು. ಹಿಂದಿ ಚಿತ್ರರಂಗದ ಖ್ಯಾತ ತಾರೆಯಾಗಿರುವ ಸಾಯಿರಾಬಾನು ಇವಳ ಮಗಳು. ದಿಲೀಪ ಕುಮಾರ್ ಇವಳ ಅಳಿಯ.
   									        (ಎಸ್.ಎಸ್.ಎಂಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ